ಹೊಸ ಸಂಸದ ಭವನದಲ್ಲಿ ಭಗವಾನ್ ಮಹಾವೀರ ಸ್ವಾಮಿಯ ಮೂರ್ತಿ ಕಂಡು ಜೈನ ಸಮುದಾಯದಲ್ಲಿ ಭುಗಿಲೆದ್ದ ಆಕ್ರೋಶ
General JAINISM

Posted by admin on 2023-05-30 17:17:24 |

Share: Facebook | Twitter | Whatsapp | Linkedin


ಹೊಸ ಸಂಸದ ಭವನದಲ್ಲಿ ಭಗವಾನ್ ಮಹಾವೀರ ಸ್ವಾಮಿಯ ಮೂರ್ತಿ ಕಂಡು ಜೈನ ಸಮುದಾಯದಲ್ಲಿ ಭುಗಿಲೆದ್ದ ಆಕ್ರೋಶ

ಜೈಪುರ : ಸರಿಸುಮಾರು 100 ವರ್ಷಗಳ ನಂತರ ದೇಶದ ಪ್ರಥಮ ಸ್ವದೇಶೀ ಸಂಸತ್ ಭವನವು ದಿನಾಂಕ 28/05/2023 ರಂದು ಪ್ರಧಾನಿ ನರೇಂದ್ರ ಮೋದಿಯವರಿಂದ ಲೋಕಾರ್ಪಣೆಗೊಂಡಿತು. ಹೊಸ ಸಂಸತ್ ಭವನದ ಉದ್ಘಾಟನೆಯ ಫೋಟೋಗಳು ವೈರಲ್ ಆಗುತ್ತಿದ್ದಂತೆ ನಿಧಾನವಾಗಿ ವಿರೋಧಗಳು ಶುರುವಾದವು. ಈ ವಿರೋಧಗಳಿಗೆ ಮೂಲ ಕಾರಣ ಹೊಸ ಸಂಸತ್ ಭವನದಲ್ಲಿ ಸ್ಥಾಪಿಸಿರುವ ಮೂರ್ತಿಗಳು. ರವಿವಾರ ಉದ್ಘಾಟನೆಗೊಂಡ ಸಂಸದ್ ಭವನದಲ್ಲಿ ಸ್ಥಾಪಿಸಲಾದ ಭಗವಾನ ಮಹಾವೀರರ ಮೂರ್ತಿಯನ್ನು ಕಂಡು ಜೈನ ಸಮುದಾಯದವರಲ್ಲಿ ಆಕ್ರೋಶ ಭುಗಿಲೆದ್ದಿತು ಮತ್ತು ಕೇಂದ್ರ ಸರಕಾರ ಹಾಗು ಲೋಕಸಭೆಯ ಅಧ್ಯಕ್ಷರಾಗಿರುವ ಓಂ ಬಿಡಲಾ ಅವರಲ್ಲಿ ಮೂರ್ತಿಯನ್ನು ತೆರವುಗೊಳಿಸುವಂತೆ ಅಥವಾ ಸರಿಯಾದ ಗೌರವ ಕೊಟ್ಟು ಮೂರ್ತಿ ಸ್ಥಾಪಿಸುವಂತೆ ಬೇಡಿಕೆ ಇಡಲಾಯಿತು. 

ಅಖಿಲ ಭಾರತ ದಿಗಂಬರ ಜೈನ ಯುವ ಏಕತಾ ಸಂಘದ ರಾಷ್ಟೀಯ ಅಧ್ಯಕ್ಷರಾದ ಶ್ರೀ ಅಭಿಷೇಕ ಜೈನರವರು ಸುದ್ದಿಗಾರರೊಂದಿಗೆ ಮಾತನಾಡುತ್ತ, "ಭಗವಾನ ಮಹಾವೀರರು ಜೈನ ಧರ್ಮದ ೨೪ ನೇ ತೀರ್ಥಂಕರರಾಗಿದ್ದಾರೆ ಹಾಗು ಅವರು ತಮ್ಮ ಸಂಪೂರ್ಣ ಜೀವನವನ್ನು ತ್ಯಾಗ, ತಪಸ್ಸು ಮತ್ತು ಧ್ಯಾನದಲ್ಲಿ ಕಳೆದರು. ಹೊಸ ಸಂಸದ ಭವನದಲ್ಲಿ ಮೂರ್ತಿಯ ಅಥವಾ ಇನ್ನ್ಯಾವುದೇ ವಿಷಯದ ಕುರಿತು ಜೈನ ಸಮುದಾಯವು ಯಾವುದೇ ಬೇಡಿಕೆ ಇಟ್ಟಿರಲಿಲ್ಲ. ಆದರೂ ಮಹಾವೀರರ ಮೂರ್ತಿ ಸ್ಥಾಪಿಸಿರುವುದು ಸಮಸ್ತ ಜೈನ ಸಮುದಾಯಕ್ಕೆ ನೀಡಿದ ಗೌರವವಾಗಿದೆ. ಆದರೆ ಭಗವಾನ್ ಮಹಾವೀರರ ಮೂರ್ತಿ ಸ್ಥಾಪನೆಯಾದ ಸ್ಥಾನ ಕಂಡು ಅತೀವ ಬೇಸರವಾಗಿದೆ ಮತ್ತು ನಾವು ಅದನ್ನು ವಿರೋಧಿಸುತ್ತೇವೆ" ಎಂದು ಹೇಳಿದರು.

ಜೈನ ಧರ್ಮದಲ್ಲಿ ಭಗವಾನರ ಮೂರ್ತಿಗಳನ್ನು ಪಂಚಕಲ್ಯಾಣ ಮಹೋತ್ಸವದೊಂದಿಗೆ ಸ್ಥಾಪನೆ ಮಾಡಲಾಗುತ್ತದೆ ಮತ್ತು ಮೂರ್ತಿಗಳನ್ನು ಉಚ್ಚ ಸ್ಥಾನದಲ್ಲಿ ಇರಿಸಲಾಗುತ್ತದೆ. ಪಂಚಕಲ್ಯಾಣವೆಂದರೆ ಗರ್ಭ, ಜನ್ಮ, ತಪ, ಕೇವಲ ಜ್ಞಾನ ಮತ್ತು ಮೋಕ್ಷ ಕಲ್ಯಾಣಗಳ ಮಹೋತ್ಸವವಾಗಿರುತ್ತದೆ. ಆದರೆ ಹೊಸ ಸಂಸತ್ ಭವನದ ನಡೆದಾಡುವ ದಾರಿಯಲ್ಲಿ ಮೂರ್ತಿಯನ್ನು ಸ್ಥಾಪನೆ ಮಾಡಿರುವುದು ಕೇವಲ ಮಹಾವೀರರು ಮಾತ್ರವಲ್ಲದೆ ಸಂಪೂರ್ಣ ಜೈನ ಸಮುದಾಯದವರ ಭಕ್ತಿಗೆ ಮಾಡಿದ ಅವಮಾನವಾಗಿದೆ. ಸಂಸದ ಭವನಕ್ಕೆ ಹೋಗುವ ಅಥವಾ ಬರುವ ವ್ಯಕ್ತಿಯು ಪಾದರಕ್ಷೆಗಳನ್ನು ಧರಿಸಿ ಈ ಸ್ಥಳದಲ್ಲಿ ಓಡಾಡುವುದು ಭಗವಾನ ಮಹಾವೀರರಿಗೆ ಸಲ್ಲಿಸುವ ಅಸಭ್ಯ ವರ್ತನೆಯಾಗಿದೆ. 

ಅಭಿಷೇಕ ಜೈನ ಮಾತನಾಡುತ್ತ ಮೂರ್ತಿಯನ್ನು ಸ್ಥಾಪಿಸುವುದಾದರೆ ಜೈನ ಧರ್ಮದ ವಿಧಿ ವಿಧಾನಗಳ ಪ್ರಕಾರ ಉಚ್ಚ ಸ್ಥಾನದಲ್ಲಿ ಸ್ಥಾಪಿಸಿ ಇಲ್ಲವಾದರೆ ಮೂರ್ತಿಯನ್ನು ತೆರವುಗೊಳಿಸಿ ಎಂದು ಹೇಳಿದರು. 

Search
Recent News
Leave a Comment:

ಕೃತಿಸ್ವಾಮ್ಯ © ಜೈನ ವಾಣಿ 2023